ಡಿಜಿಟಲ್ ಹೆಜ್ಜೆ ಗುರುತುಗಳುನಮ್ಮ ಕೆಲಸದ ಸ್ಥಳದಲ್ಲಿ ಅಥವಾ ನಾವು ವಾಸಿಸುವಲ್ಲಿ  ಇತರರ ವ್ಯವಹಾರದಲ್ಲಿ ಆಸಕ್ತಿ ಇರದಿದ್ದರೂ  ಅವರ ನಡೆವಳಿಕೆಯನ್ನು ಮತ್ತು ವ್ಯವಹಾರವನ್ನು  ತಿಳಿಯದೆ ಇರುವುದು ಈ ಮಿನ್ನರಿವಿನ ಯುಗದಲ್ಲಿ ಅಸಾಧ್ಯವಾಗಿರುತ್ತದೆ. ನಮ್ಮ  ಮಕ್ಕಳಿಗೆ  ನಾವು  ನಂಬಿಕೆ ಮತ್ತು ಭದ್ರತೆಯ ಪರಿಸರವನ್ನು  ನಿರ್ಮಿಸುತ್ತೇವೆ.  ಈ ಭದ್ರತೆಯೇ  ಅವರನ್ನು   ಸಾಮಾಜಿಕ ಮಾಧ್ಯಮ, ಅಥವಾ ಅಂತರ್ಜಾಲದಲ್ಲಿ ಇರುವ  ಅಪಾಯಗಳ ಅರಿವಿಲ್ಲದಂತೆ ಮಾಡುತ್ತದೆ. ನಮ್ಮ ಮಕ್ಕಳು ಸಾಮಾಜಿಕ ಮಾಧ್ಯಮದ ಅಥವಾ ಅಂತರ್ಜಾಲದ ಮಾಹಿತಿಯುಕ್ತ ಮತ್ತು ಜವಾಬ್ದಾರಿಯುತವಾದ ಬಳಕೆಯನ್ನು ಮಾಡುವಂತೆ ತಿಳಿಹೇಳುವುದು  ಪೋಷಕರಾಗಿ  ನಮ್ಮ ಕರ್ತವ್ಯವಾಗಿರುತ್ತದೆ.  ನೇರ ಸಲಹೆಗಳನ್ನು ಸಾಮಾನ್ಯವಾಗಿ ನಾವು ಧನಾತ್ಮಕವಾಗಿ  ಅದು ತರ್ಕಬದ್ಧವಾಗಿದ್ದರೂ ವಿಚಿತ್ರ ಕಾರಣಗಳಿಂದಾಗಿ ಸ್ವೀಕರಿಸುವುದಿಲ್ಲ.  ಹೆಚ್ಚು ವಿದ್ಯಾವಂತರಾಗಿದಷ್ಟು, ನಾವು ಮತ್ತು ನಮ್ಮ ಮಕ್ಕಳು ಸಾಮಾನ್ಯವಾಗಿ ಅಂತರ್ಜಾಲದ ಜವಾಬ್ದಾರಿಯುತ ಬಳಕೆಯ ಬಗ್ಗೆ ನಮಗೆ ಸಲಹೆ ನೀಡಲು ಯಾರೂ ನಿಜವಾಗಿಯೂ ಅರ್ಹರಾಗಿಲ್ಲ ಎಂದು  ಭಾವಿಸುತ್ತೇವೆ. ಇನ್ನೊಬ್ಬರ ಮಾತುಗಳು ತರ್ಕಬದ್ಧವಾಗಿದ್ದರೂ ನಾವು ನಮ್ಮ ಭಾವನೆಗಳನ್ನು ಕಲಕಿಸಿ ನಿಜವಾದ ಉದ್ದೇಶಗಳಿದ್ದ ಸಲಹೆಗಳನ್ನು ಸ್ವೀಕರಿಸಲು  ಅಸಮರ್ಥರಾಗುತ್ತೇವೆ.
ಸಾಮಾಜಿಕ ಮಾಧ್ಯಮದ ಜವಾಬ್ದಾರಿಯುತ ಬಳಕೆಯ ಸಂದೇಶಗಳನ್ನು ಪ್ರತಿಯೊಬ್ಬರಿಗೂ ಸ್ವೀಕಾರಾರ್ಹರಾಗುವಂತೆ ಪರಿಣಾಮಕಾರಿಯಾಗಿ ತಿಳಿಸುವುದು ಸದ್ಯದ ಅವಶ್ಯಕತೆಯಾಗಿದೆ.  ಈ ಸಲಹೆಗಳು ನೇರವಾಗಿರದೆ  ಪರೋಕ್ಷವಾಗಿದ್ದರೆ ಉತ್ತಮ. ಹಿರಿಯರು ಅಥವಾ ಅಧಿಕಾರಸ್ಥಾನದಲ್ಲಿರುವವರು ಪರೋಕ್ಷವಾಗಿ ಇಂತಹ ಸಲಹೆಗಳನ್ನು ನೀಡಿದರೆ ಅವು ಹೆಚ್ಚು ಪರಿಣಾಮಕಾರಿಯಾಗುತ್ತದೆ. ನಾವು ಪೋಷಕರಾಗಿ ನಮ್ಮ ಮಕ್ಕಳು ಏನನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರು ಇಷ್ಟಪಡುವ ಮಾಧ್ಯಮ, ಅದು ಚಿತ್ರಕಲೆ, ಸಂಗೀತ, ಅಥವಾ ಕವಿತೆಯಾಗಿರಬಹುದು,  ಇವುಗಳನ್ನೇ ಸಾಧನಗಳನ್ನಾಗಿ ಬಳಸಿ ಸಾಮಾಜಿಕ ಮಾಧ್ಯಮದ  ಚಾಳಿ ಹಾವಳಿಯ ವಿರುದ್ಧ ಸಲಹೆಗಳನ್ನು  ನೀಡಬಹುದು.  ನಮಗೆ ಅಭ್ಯಾಸವಾಗಿರುವ  ಸಾಮಾಜಿಕ ಮಾಧ್ಯಮದ  ಸಾಧನಗಳನ್ನೇ ಬಳಸಿ ನಮ್ಮ ಸಲಹೆಗಳನ್ನು ವ್ಯಾಪಕವಾಗಿ ಎಲ್ಲರನ್ನು ತಲುಪುವಂತೆ ಪ್ರಚಾರ ಮಾಡಬಹುದು.
ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮ ನಮ್ಮ ಪೀಳಿಗೆಗೆ ಸಂದ ಇದುವರೆಗಿನ ಅದ್ಬುತ ಆವಿಷ್ಕಾರ.  ನಮ್ಮ ನಡವಳಿಕೆ ಮತ್ತು ದುಃಖಕ್ಕೆ ಅಂತರಜಾಲವನ್ನು ಹೊಣೆಯಾಗಿರಿಸುವುದು  ನಮ್ಮ ಹೊಣೆಗೇಡಿತನ. ಸಾಮಾಜಿಕ ಮಾಧ್ಯಮವನ್ನು ನಮ್ಮ, ನಮ್ಮ ಕುಟುಂಬದ, ಅಥವಾ ಸಮಾಜದ ಒಳಿತಿಗಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ನಮ್ಮ ತಿಳುವಳಿಕೆಯ ಕೊರತೆಗಾಗಿ  ಸಾಮಾಜಿಕ ಮಾಧ್ಯಮವನ್ನು ದೂಷಿಸುವುದು ಸರಿಯಲ್ಲ.
ಇತ್ತೀಚಿನವರೆಗೆ ಶಿಕ್ಷಕರು ಹೆಚ್ಚಿನ  ವಿಷಯಗಳಲ್ಲಿ ಮಕ್ಕಳಿಗೆ  ಮಾರ್ಗಧರ್ಶಕರಾಗಿದ್ದರು.  ತಮ್ಮ ಕ್ಷೇತ್ರದ ಪರಿಣಿತಿಯನ್ನು ಅನ್ವೇಷಿಸಲು ಮತ್ತು  ವ್ಯಕ್ತಪಡಿಸುವಲ್ಲಿನ  ವಿಫಲತೆ, ಮತ್ತು ಹೊಸ ತಂತ್ರಜ್ಞಾನವನ್ನು ಬಳಸುವಲ್ಲಿನ ಮೇಳೈಕೆಯ ಕೊರತೆಯಿಂದಾಗಿ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ವಿಫಲರಾಗುತ್ತಿದ್ದರೋ ಎನ್ನುವ  ಅನುಮಾನ ನಮ್ಮನ್ನು ಬಲುವಾಗಿ ಕಾಡುತ್ತಿದೆ. ಎಲ್ಲರೂ ಗಮನಿಸಬೇಕಾದ ವಿಷಯವೇನೆಂದರೆ  ನಾವು ಶಿಕ್ಷಕರಿಗೆ ಇರಬೇಕಾದ ಹುರುಪನ್ನು ಕಳೆದುಕೊಂಡಿದ್ದೇವೆ ಮತ್ತು  ಮಾಡಲು ಬೇರೆ ಯಾವ ಕೆಲಸ ಸಿಗದೇ  ಶಿಕ್ಷಕ ವೃತ್ತಿಯನ್ನು ನೆಚ್ಚಿಕೊಂಡಿದ್ದೇವೆ ಎಂದನಿಸುತ್ತದೆ.  ಶಿಕ್ಷಕರಾಗಿ ನಾವು ಪೋಷಕರೊಂದಿಗೆ ವಿಚಾರ ವಿನಿಮಯ ಮಾಡುವಾಗ  ಪೋಷಕರ  ಖಂಡನೆ ಮತ್ತು ವೀಕ್ಷಣೆಯ ನಡುವಿನ  ಅರಿವು ಸ್ಪಷ್ಟವಾಗಿ ನಮಗೆ ತಿಳಿದಿರಬೇಕು.  ಹೀಗಿರುವಾಗ ಮಾತ್ರ ನಾವು ಓರ್ವ ಶಿಕ್ಷಕನಾಗಿ ಅಥವಾ ಒಳ್ಳೆಯ ಮನುಷ್ಯನಾಗಿ ಬೇರೆಯವರೊಂದಿಗೆ ಚರ್ಚಿಸಲು ಸಾಧ್ಯವಾಗುತ್ತದೆ. ಪೋಷಕರ ಪ್ರತಿಯೊಂದು ಹೇಳಿಕೆಗೂ ರಕ್ಷಣಾತ್ಮಕವಾಗಿ ಸ್ಪಂದಿಸಿದರೆ  ವಿಷಯ ಜಟಿಲವಾಗಿ   ಪೋಷಕರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.
ಸಾರ್ವಜನಿಕ ವೈಚಾರಿಕ  ಕ್ಷೇತ್ರದಲ್ಲಿ ನಮ್ಮ ಬಳಕೆಗಾಗಿ ನಾವು ಗ್ರಹಿಸಲು ಸಿದ್ಧರಿದ್ದರೆ  ಬಹಳಷ್ಟು ವಿಚಾರಗಳ, ಜ್ಞಾನದ ಸಂಗ್ರಹಣೆಗಳಿವೆ.  ನಮ್ಮ ಜಾಗ್ರತಿಯನ್ನು ಶ್ರತಿ ಮಾಡಿದಷ್ಟು ನಮ್ಮ ಗ್ರಹಿಕೆಯ  ಮಟ್ಟ ಹೆಚ್ಚಾಗುತ್ತದೆ. ಪ್ರಾಮಾಣಿಕವಾದ ಅಗತ್ಯತೆ  ಏನೆಂದರೆ ವಿಷಯವನ್ನು ನಮಗೆ, ನಮ್ಮ ದ್ರಷ್ಟಿಕೋನಕ್ಕೆ, ನಮ್ಮ ಸಂತೋಷಕ್ಕೆ, ಅಥವಾ ನಮ್ಮ ಹೆಮ್ಮೆಗೆ ಸರಿಯಾಗಿ ಅರ್ಥಮಾಡಿಕೊಳ್ಳದೆ, ಯಾವುದೇ ಭಾವನೆಯ ಒತ್ತಡಕ್ಕೆ ಸಿಲುಕದೆ ವಿಷಯವನ್ನು ವಸ್ತುಸ್ಥಿತಿಯ ಹಾಗೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯ.
ಹೆಚ್ಚಾಗಿ ನಮ್ಮ ಪ್ರಸ್ತುತ ಹಾದಿಯನ್ನು ವಿರೋಧಿಸುವ ಸತ್ಯವನ್ನು ನಾವು ಪ್ರತಿ ದಿನವೂ ಎದುರಿಸುತ್ತೇವೆ, ಮತ್ತು ಅದನ್ನು ಒಪ್ಪಿಕೊಳ್ಳಲು ನಮಗೆ ಕಷ್ಟವಾಗುತ್ತದೆ.  ದಿನನಿತ್ಯದ ನಮ್ಮ ಅಭ್ಯಾಸಗಳ  ಅಥವಾ ವರ್ತನೆಗಳ  ನಿಶ್ಚಿತವಾದ ಬದಲಾವಣೆ ಮಾಡಲು ನಾವು ಹಿಂಜರಿಯುತ್ತೇವೆ.  ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದ ವ್ಯಸನವು ನಮ್ಮ ಉತ್ಪಾದಕತೆ ಮತ್ತು ವೈಯಕ್ತಿಕ ಯೋಗಕ್ಷೇಮಕ್ಕೆ ಖಂಡಿತವಾಗಿ ಹಾನಿಕಾರಕವಾಗಿದೆ. ವರ್ತನೆಯ ಬದಲಾವಣೆಯು ವೈಯಕ್ತಿಕ ಬದ್ಧತೆಯೊಂದಿಗೆ ನಿಸ್ಸಂಶಯವಾಗಿ ಸಾಧ್ಯ.  ಡಿಜಿಟಲ್ ಹೆಜ್ಜೆಗುರುತಿನ  ಕುರಿತು ನಮ್ಮ ಸುತ್ತಲೂ ನಾವು ಜಾಗೃತಿ ಮೂಡಿಸಬೇಕು. ಕಾರ್ಬನ್ ಹೆಜ್ಜೆಗುರುತು ನಮ್ಮ ದೈಹಿಕ ಪರಿಸರದ ಮೇಲೆ ಪರಿಣಾಮ ಬೀರಿದರೆ, ಡಿಜಿಟಲ್ ಹೆಜ್ಜೆಗುರುತು ನಮ್ಮ ವೈಯಕ್ತಿಕ ಬದುಕಿನ ಮೇಲೆ, ನಮ್ಮ ಜೀವನೋಪಾಯದ ಮೇಲೆ ಪರಿಣಾಮಬೀರುತ್ತದೆ.  ನಾವು ನಿಜವಾಗಿಯೂ ನಮ್ಮಅಂತರ್ಜಾಲದ, ಸಾಮಾಜಿಕ ಮಾಧ್ಯಮಗಳ ವೀಕ್ಷಣೆ, ಮತ್ತು ಪ್ರಕಟಣೆಯ  ಹಿನ್ನಡಾವಳಿಯನ್ನು ಅಂತರ್ಜಾಲದಲ್ಲಿನ ವ್ಯಾಪಕ ಮಾಹಿತಿ ವ್ಯವಸ್ಥೆಯಲ್ಲಿ ಅಜ್ಞಾತ ವ್ಯಕ್ತಿಗಳ ಪರಿಶೀಲನೆಗೆ ಬಿಡುತ್ತೇವೆ.  ನಾವು ಜಾಗರೂಕರಾಗಿರದಿದ್ದರೆ ಈ ಅಂತರ್ಜಾಲದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ.
ಕೇವಲ ಸೈನ್ ಇನ್ ಮಾಡುವ ಮೂಲಕ ಮತ್ತು ಆನ್ಲೈನ್ ಸಂಪನ್ಮೂಲಕ್ಕೆ ದೃಢವಾದ ಪಾಸ್ವರ್ಡ್ ನೀಡುವ ಮೂಲಕ, ನೀವು ಬಳಸುತ್ತಿರುವ ಅಪ್ಲಿಕೇಶನ್ನೊಂದಿಗೆ ನೀವು ಸುರಕ್ಷಿತರಾಗಿದ್ದೀರಿ ಎಂದು ನೀವು ಸಮರ್ಥಿಸಿಕೊಳ್ಳುವ  ಹಾಗಿಲ್ಲ.  ಹಲವಾರು ಕಾರಣಗಳಿಗಾಗಿ ನಿಮ್ಮ ಸ್ವಂತದ ಡಿಜಿಟಲ್ ಉಪಕರಣಗಳಲ್ಲಿರುವ ವಿವಿಧ ರೀತಿಯ ತಂತ್ರಾಂಶಗಳು,  ನಿಮ್ಮ ಸಂಚರಣೆ ಮತ್ತು ಚಟುವಟಿಕೆಗಳನ್ನು ನಿಮ್ಮ ಒಪ್ಪಿಗೆಯಿಲ್ಲದೆ  ದಾಖಲಿಸುತ್ತದೆ. ನಿಮ್ಮ ಜೀವನವನ್ನು ಸಾರ್ವಜನಿಕವಾಗಿ ನೀವು ಬಹಿರಂಗ ಪಡಿಸಲು ಆಯ್ಕೆ ಮಾಡಿದ ಮೇಲೆ ಅದು ರಹಸ್ಯವಾಗಿ ಇಟ್ಟುಕೊಳ್ಳುವುದು ಬಹಳ  ಕಷ್ಟ.  ಒಮ್ಮೆ ಹೀಗೆ ದಾಖಲಾದ ವಿಷಯಗಳನ್ನು ನೀವು ಅಳಿಸಬಹುದೆಂದು ನಂಬುತ್ತೀರಿ ಮತ್ತು ಅಳಿಸುತ್ತೀರಿ ಕೂಡ. ಆದರೆ ನಿಜವಾಗಿಯೂ ನೀವು ದಾಖಲು ಮಾಡಿದ ವಿಷಯಗಳು ಅಳಿಸುತ್ತವೆಯೇ ? ಖಂಡಿತ  ಅಸಾಧ್ಯ.  ಬಹಳಷ್ಟು ಸಂಗತಿಗಳು  ಅಳಿಸಿ ಹೋಗುವುದಿಲ್ಲ.  ಸಾಮಾಜಿಕ ಮಾಧ್ಯಮವು ಪ್ರತಿಯೊಬ್ಬರ ಜಾಗತಿಕ ನಕ್ಷೆಯನ್ನು ಹೊಂದಿದೆ, ವ್ಯಕ್ತಿಗಳು ಹೇಗೆ ಇನ್ನೊಬ್ಬರಿಗೆ  ಸಂಬಂಧಪಟ್ಟಿದ್ದಾರೆ, ಕುಟುಂಬ, ಸ್ನೇಹಿತರು, ಅಥವಾ ಇತರ ಜನರೊಂದಿಗೆ ನೀವು ಹೇಗೆ ಹರಟೆ ಹೊಡೆಯುತ್ತೀರಿ, ಪ್ರತಿಯೊಂದು  ದಾಖಲಿಸಲ್ಪಡುತ್ತದೆ. ನಮ್ಮ ಜೀವನದ  ಘಟನೆಗಳು ಮತ್ತು ಆಸಕ್ತಿಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎನ್ನುವ ಸತ್ಯ ಸಾಮಾನ್ಯರಿಗೆ ತಿಳಿದಿರುವುದಿಲ್ಲ.  ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಆಲೋಚನೆಗಳು ಮತ್ತು ಕಾರ್ಯಗಳು  ನಮಗರಿವಿಲ್ಲದಂತೆ ಉಳಿಸಲ್ಪಡುತ್ತದೆ ಮತ್ತು ಇದರ ಪರಿಣಾಮ ಮಾತ್ರ ತುಂಬಾ ಗಂಭೀರ.  ವಿಶ್ವವಿದ್ಯಾನಿಲಯಗಳು  ತಮ್ಮಲ್ಲಿ ಕಲಿಯಲು  ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ  ಸಾಮಾಜಿಕ ಮಾಧ್ಯಮದ ಸಂವಹನ, ಪ್ರೊಫೈಲ್ ಪುಟಗಳು (ವ್ಯಕ್ತಿಚಿತ್ರ)  ಮತ್ತು ಅವರು ಪ್ರಕಟಿಸಿದ ಅನಿಸಿಕೆ ಅಥವಾ ಟೀಕೆಗಳನ್ನು ಅಧ್ಯಯನ ಮಾಡುತ್ತವೆ.  ವಿದ್ಯಾರ್ಥಿಗಳ ವ್ಯಕ್ತಿಚಿತ್ರ ಅಥವಾ ಅವರು ಪ್ರಕಟಿಸಿದ ಅನಿಸಿಕೆಗಳು ವಿಶ್ವವಿದ್ಯಾನಿಲಯಗಳು  ಅನುಮೋದಿಸದೆ ಅವರ ಕಲಿಕೆಯ ಅರ್ಜಿಗಳನ್ನು ಕೈಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ವಿಶ್ವವಿದ್ಯಾನಿಲಯಗಳು  ಮಾತ್ರವಲ್ಲ, ಸಾಮಾಜಿಕ ಮಾಧ್ಯಮದ ವಿನಿಮಯವನ್ನು ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಗಳು ವಿಚಾರಿಸಿ ಬಳಸುತ್ತಾರೆ. ನಿಮ್ಮ ನೇಮಕಕ್ಕೆ  ಸಹಿ ಮಾಡುವ ಮೊದಲು ಉದ್ಯೋಗದಾತರು ನಿಮ್ಮ ಬಗ್ಗೆ  ತಮ್ಮ ಸಂಶೋಧನೆಗಳನ್ನು ಖಂಡಿತವಾಗಿ ಮಾಡುತ್ತಾರೆ, ನಿಮ್ಮ ಡಿಜಿಟಲ್ ಹೆಜ್ಜೆಗುರುತು ನಿಮ್ಮ ಕನಸಿನ ಕೆಲಸವನ್ನು ಪಡೆಯಲು ನಿರ್ಣಾಯಕ ಅಂಶವಾಗಿದೆ.  ಅಭಿವ್ಯಕ್ತಿ ಸ್ವಾತಂತ್ರ್ಯವು ತಮ್ಮ ವೃತ್ತಿಜೀವನವನ್ನು ತ್ಯಾಗಮಾಡಲು ತಯಾರಾದವರಿಗೆ ಮಾತ್ರ ಎನ್ನುವ ಕಟು ಸತ್ಯದ ಅರಿವು ನಮಗಿರುವುದು ಅವಶ್ಯವಾಗಿದೆ.

ನೀವು ದಾಖಲಿಸಿದ ಪ್ರಕಟಣೆಗಳು ಮಾತ್ರ ನಿಮ್ಮ ಡಿಜಿಟಲ್ ಹೆಜ್ಜೆ ಗುರುತು ಎಂದು ಭಾವಿಸದಿರಿ. ನೀವು ಕೇವಲ ಡಿಜಿಟಲ್ ಉಪಕರಣ ಹೊಂದಿದ್ದರೆ ನಿರಂತರವಾಗಿ ನಿಮ್ಮ ಚಟುವಟಿಕೆಗಳು ದಾಖಲಾಗುತ್ತಿರುತ್ತವೆ. ಇದನ್ನು  ಮಾಹಿತಿ ನಿಷ್ಕಾಸ (Data Exhaust) ಎಂದು ಕರೆಯುತ್ತಾರೆ.   ಮಾಹಿತಿ ನಿಷ್ಕಾಸವು ಜನರ ಮಿನ್ಕಾಣ್ಕೆ (Online) ಚಟುವಟಿಕೆಗಳ  ಮತ್ತು ಆಯ್ಕೆಗಳ ಉಪಉತ್ಪನ್ನವಾಗಿ ಉತ್ಪತ್ತಿಯಾದ ಮಾಹಿತಿಯಾಗಿರುತ್ತದೆ.  ನೀವು ಭೇಟಿ ನೀಡುವ ಜಾಲತಾಣ, ನೀವು ಬಳಸುವ ಮೊಬೈಲ್ ಅಪ್ಲಿಕೇಶನ್ ಅಥವಾ ನೀವು ಬಳಸುವ ಮಿನ್ಕಾಣ್ಕೆ ಸೇವೆಗಳು ನಿಮ್ಮ ಡಿಜಿಟಲ್ ಹೆಜ್ಜೆಗುರುತನ್ನು ದಾಖಲಿಸುತ್ತವೆ. ನೀವು ಫೋನಿನ್ನಲ್ಲಿ ನಿಮ್ಮ ಕುಟುಂಬ ಅಥವಾ ಪ್ರೀತಿ ಪಾತ್ರರೊಂದಿಗೆ ಮಾತನಾಡುತ್ತಿರುವಾಗ, ಸಂದೇಶಗಳನ್ನು ಕಳಿಸುವಾಗ, ಸಾಮಾಜಿಕ ಮಾಧ್ಯಮದ ಪ್ರಕಟಣೆಗಳ  ಮೂಲಕ, ಮೊಬೈಲ್ ಅಪ್ಪ್ಲಿಕೇಷನ್ಗಳ ಬಳಕೆ ಮಾತ್ರದಿಂದ ಅಥವಾ ನಿಮ್ಮ ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್  ಹಿಡಿದು ನಿಮ್ಮ ನಗರವನ್ನು ಬರಿದೆ ಸುತ್ತಾಡುವ ಮೂಲಕ   ನೀವು ನಿಮ್ಮ ಮಾಹಿತಿ ನಿಷ್ಕಾಸವನ್ನು ಅನುಕ್ಷಣ ದಾಖಲಾತಿಸುತ್ತೀರಿ. ನೀವು ಭೇಟಿ ನೀಡುವ ಸ್ಥಳಗಳು,  ಕ್ರಮಿಸುವ ದಾರಿಯ ದಾಖಲೆಯೂ ಸಂಗ್ರಹಿಸಲ್ಪಡುತ್ತದೆ ಎನ್ನುವುದನ್ನು ಮರೆಯಬೇಡಿ.  ವಾಸ್ತವವಾಗಿ ವಿವಿಧ ಆಂಟೆನಾಗಳು  ನಿಮ್ಮ ಜಿಪಿಎಸ್ ಮಾಹಿತಿಯನ್ನು ಪ್ರತಿಕ್ಷಣ ಎತ್ತಿಕೊಳ್ಳುತ್ತಿರುತ್ತವೆ. ಅಂತರಜಾಲ ವ್ಯಾಪಾರಗಳು, ನೀವು ಅಂತರ್ಜಾಲದಲ್ಲಿ ವ್ಯವಹರಿಸುವಾಗ, ಅವರ  ಸೇವೆಗಳನ್ನು ಸುಧಾರಿಸಲು ಮತ್ತು ನಿಮ್ಮ ಪ್ರಾಶಸ್ತ್ಯಗಳನ್ನು ತಿಳಿಯಲು  ನಿಮ್ಮ ಮಾಹಿತಿ ನಿಷ್ಕಾಸದ ಅಧ್ಯಯನ ಮಾಡುತ್ತವೆ.  ಈ ಅಧ್ಯಯನ ನಿಮಗೆ ಸೇವೆಗಳ, ಅಥವಾ ಉತ್ಪನ್ನಗಳ ಆಯ್ಕೆಗಳನ್ನು  ಅವರ ಲಾಭಕ್ಕಾಗಿ  ನಿಮಗೆ ನೀಡುತ್ತವೆ.
ನೀವು ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಅಥವಾ ವಾಟ್ಸಾಪ್ ಮೂಲಕ  ಅಪ್ಲೋಡ್ ಅಥವಾ ಡೌನ್ಲೋಡ್ ಮಾಡುವ ಮೊದಲು ದಯವಿಟ್ಟು  ನಿಧಾನಿಸಿ.  ಸಮಯ ತೆಗೆದುಕೊಳ್ಳಿ, ಯೋಚಿಸಿ, ಪರಿಗಣಿಸಿ, ಈ ತ್ವರಿತ ಮಾಹಿತಿ ನಿಮ್ಮ ಭರವಸೆ ಮತ್ತು ಕನಸುಗಳ ಮೇಲೆ  ಹೇಗೆ ಮಹತ್ತರ ಪರಿಣಾಮ ಬೀರುತ್ತದೆ ಎನ್ನುವುದನ್ನು ಯೋಚಿಸಿ.  ಈ ನಿರ್ಲಕ್ಷದ ಸಂಹವನವನ್ನು ಹೇಗೆ ವ್ಯಾಖ್ಯಾನ ಮಾಡಲಾಗುತ್ತದೆ ಮತ್ತು ಪ್ರಕಟಿಸಲಾಗುತ್ತದೆ, ಹೇಗೆ ಅದು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ವಿಮರ್ಶಿಸಿ. ಭವಿಷ್ಯದಲ್ಲಿ ನೀವು ಏನಾಗುತ್ತೀರಿ ಎನ್ನುವ ಕಲ್ಪನೆ ನಿಮಗಿರುವುದಿಲ್ಲ, ಮುಂದೆ ನಿಮ್ಮ ವಿರೋಧಿಗಳು ನಿಮ್ಮ ಡಿಜಿಟಲ್ ಹೆಜ್ಜೆಗುರುತುಗಳ್ಳನ್ನು ಶೋಧಿಸಿ, ನಿಮ್ಮ ಹಿಂದಿನ ಮಾಹಿತಿಯನ್ನು ಪ್ರಕಟಮಾಡುವಾಗ ನಿಮಗೆ ನಿಮ್ಮನ್ನು ಹೇಗೆ ಸಮರ್ಥಿಸುವುದು ಎನ್ನುವುದು ತಿಳಿಯಲಾರದು. ಈ ಸ್ವಕಲ್ಪಿತ ಸಮಸ್ಯೆಗೆ ಪರಿಹಾರವೇನು? ನಾವು ನಿಜವಾಗಿಯೂ ಹೇಗೆ ಸುರಕ್ಷಿತರಾಗಿ ಇರಬಹುದು? ನಿಮ್ಮ ಜೀವನದ ಅಂಶಗಳು ಖಾಸಗಿಯಾಗಿರಬೇಕಾದರೆ ನೀವು ಅದನ್ನು ಖಾಸಗಿಯಾಗಿ ಇಟ್ಟುಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆ ಮತ್ತು ಸಾಧನೆಗಳನ್ನು ನೀವು ಪ್ರಕಟಿಸಬೇಕಾಗಿಲ್ಲ.  ಅಂತರ್ಜಾಲ ಸಂಪರ್ಕದಿಂದ ಮಾತ್ರ ನಾವು ನಿರಂತರವಾಗಿ ಒಟ್ಟಿಗೆ ಇರಬೇಕು ಎಂದೇನಿಲ್ಲ.  ನಿಮ್ಮ ಐದು ಇಂದ್ರಿಯಗಳೊಂದಿಗೆ ನೀವು ಗ್ರಹಿಸುವಂತಹ ಇಡೀ ಪ್ರಪಂಚವು ಇಲ್ಲಿದೆ.  ಸಾಮಾಜಿಕ ಮಾಧ್ಯಮದ ಹೊರಗೆ ನೀವು ಇತರರೊಂದಿಗೆ ಒಟ್ಟಾಗಿ ಅವರ ಮನಸ್ಸಿನಲ್ಲಿ ಸ್ಮ್ರತಿಯಾಗಿ ಇರಬಹುದು,   ಆದರೆ ದಯವಿಟ್ಟು, ಅಪರಿಚಿತ ಜನರಿಂದ ನಿಮ್ಮ ಡಿಜಿಟಲ್ ಹಿನ್ನಡವಳಿಯನ್ನು ತನಿಖೆಗಾಗಿ ಬಿಡಬೇಡಿ.

ಆದ್ದರಿಂದ ಮತ್ತೊಮ್ಮೆ, ನೀವು ಸಾಮಾಜಿಕ ಮಾಧ್ಯಮದಲ್ಲಿ ಸೈನ್ ಇನ್ ಮಾಡುವ  ಮೊದಲು ಮತ್ತು ನಿಮ್ಮ ಅನಿಸಿಕೆಗಳನ್ನು ದಾಖಲು ಮಾಡುವ  ಮೊದಲು, ಬೇರೊಬ್ಬರನ್ನು ಟ್ಯಾಗ್ ಮಾಡುವ ಮೊದಲು ಆಲೋಚಿಸಿ. ಏಕೆಂದರೆ ನಮ್ಮ ಡಿಜಿಟಲ್ ನಿರ್ಧಾರಗಳು ಶಾಶ್ವತ ಪರಿಣಾಮವನ್ನು ಬೀರುತ್ತವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಜೀವನದಲ್ಲಿ ನಮ್ಮ ನಿರ್ಧಾರಗಳನ್ನು ರದ್ದುಗೊಳಿಸಲು ಕಂಟ್ರೋಲ್ ಝೆಡ್  (Control Z) ಇಲ್ಲ.  ನಿಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಜಾಲತಾಣಗಳನ್ನು ಬಳಸಿ. ನೀವು ಬುದ್ಧಿವಂತ ನಿರ್ಧಾರಗಳನ್ನು ಮಾಡಿದರೆ ಜಾಲತಾಣಗಳು ನಮ್ಮ ವೈಯಕ್ತಿಕ ಬೆಳವಣಿಗೆಗೆ ಗಮನಾರ್ಹವಾದ ಸಂಪನ್ಮೂಲವಾಗಿದೆ. ನಾವು ಕೀಲಿಮಣೆಯ ಮೂಲಕ ಏನನ್ನು ಬರೆಯುತ್ತೇವೆ ಅದನ್ನು ನಿಯಂತ್ರಿಸಿ ಪರಾಮರ್ಶಿಸಿದರೆ ಜೀವನ ಸುಂದರವಾಗುತ್ತದೆ.

Comments